Chief Editor
Manohar. R (Manu)
Photo Journalist
chitrataramanu@gmail.com
+91 9845549026
5ಡಿ ಸೇಡಿನ ಕಿಚ್ಚಿಗೆ ರಕ್ತದ ನಂಟು --- ರೇಟಿಂಗ್ : 3/5 ***
Posted date: 17 Sat, Feb 2024 08:50:24 AM
ತನ್ನ ಕುಟುಂಬಕ್ಕಾದ ಅನ್ಯಾಯ, ಹಳ್ಳಿಯ 1305 ಮುಗ್ಧ ಜನರ ಸಾವಿಗೆ ಕಾರಣರಾದ _ಐವರು ಸಮಾಜ ಘಾತುಕರನ್ನು ಉಪಾಯದಿಂದಲೇ ಬಲಿ ತೆಗೆದುಕೊಳ್ಳುವ  ಮಗನ ಕಥೆ ಹೇಳುವ ಚಿತ್ರ  5ಡಿ ಈ ವಾರ ತೆರೆಕಂಡಿದೆ. ಈಗಾಗಲೇ ನಿಮಗೆ 5ಡಿ  ಅಂದ್ರೇನಂತ ಅರ್ಥವಾಗಿರುತ್ತಲ್ಲವೆ.
 
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸದಾ ಉಳಿಯುವಂಥ ಅನರ್ಘ್ಯ ಚಿತ್ರರತ್ನಗಳನ್ನು ಕೊಟ್ಟಂಥ ನಿರ್ದೇಶಕ ಎಸ್.ನಾರಾಯಣ್ ಅವರ ನಿರ್ದೇಶನದ 50ನೇ ಸಿನಿಮಾ ಎಂಬ ಕಾರಣಕ್ಕೆ ಈ ಚಿತ್ರ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು  ಹುಟ್ಟುಹಾಕಿತ್ತು, ಅರ್ಧ ಶತಕದ ಚಿತ್ರ ಕೊಂಚ ವಿಭಿನ್ನವಾಗಿರಲೆಂದೇ ತಮ್ಮ ಜಾನರ್ ಬಿಟ್ಟು ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ  ನಾರಾಯಣ್ ಅವರು 5 ಡಿ ಚಿತ್ರವನ್ನು ನಿರೂಪಿಸಿದ್ದಾರೆ. ಬ್ಲಡ್ ಮಾಫಿಯಾ ಜೊತೆಗೆ ಘೋರ ಹತ್ಯಾಕಾಂಡ ನಡೆಸಿದ ದುರುಳರ ವಿರುದ್ದ ಸೇಡು ತೀರಿಸಿಕೊಳ್ಳುವ ವೀರಪುತ್ರನ ಕಥೆಯನ್ನವರು ತೆರೆಮೇಲೆ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ.  
 
ಕಳೆದ 30 ವರ್ಷಗಳಿಂದಲೂ ಸ್ನೇಹಿತರಾಗಿ ವ್ಯವಹಾರ ನಡೆಸುತ್ತಿದ್ದ, ಐವರು ಉದ್ಯಮಿಗಳಲ್ಲಿ ಇಬ್ಬರು ಅತ್ಯಂತ ಕ್ರೂರವಾಗಿ ಕೊಲೆಯಾಗುವ ಮೂಲಕ ಸಿನಿಮಾ ತೆರೆದುಕೊಳ್ಳುತ್ತದೆ. ಒಬ್ಬೊಬ್ಬರನ್ನೂ ಬರ್ಬರವಾಗಿ ಹತ್ಯೆದವನ ಮನದಲ್ಲಿ ಸೇಡಿನ ಜ್ವಾಲೆ ಅದೆಷ್ಟು ಪ್ರಖರವಾಗಿತ್ತೆಂದು ಊಹಿಸಬಹುದು.  ಪೊಲೀಸರು ಆ ಹಂತಕನನ್ನು ಪತ್ತೆ ಹಚ್ಚಲು ಸಾಕಷ್ಟು ತಲೆಕೆಡಿಸಿಕೊಂಡರೂ ಸಾಧ್ಯವಾಗದ ಕಾರಣ, ವಿಶೇಷ ತನಿಖಾಧಿಕಾರಿಯಾಗಿ ಅಭಿನಂದನ್(ಎಸ್. ನಾರಾಯಣ್) ಅವರನ್ನು ಕರೆಸಿಕೊಳ್ಳಲಾಗುತ್ತದೆ. 
ಇದಕ್ಕೂ ಮೊದಲು ಗೂಡ್ಸ್ ವಾಹನ ನಡೆಸುತ್ತಿರುವ ಅದಿತಿ ಪ್ರಭುದೇವ ಹಾಗೂ ಬೋರ್‌ವೆಲ್ ವಾಹನದ ಚಾಲಕ ಶಕ್ತಿ(ಆದಿತ್ಯ) ಇವರಿಬ್ಬರ  ಪಾತ್ರಗಳನ್ನು ಪರಿಚಯಿಸಲಾಗುತ್ತದೆ, ನಾರಾಯಣ್ ಅವರಿಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದ ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ಅಭಿನಂದನ್ ಆಗಿ, ಯಾವುದೇ ಸುಳಿವೂ ಸಿಗದಂತೆ ಕೊಲೆ ಮಾಡುವ ಹಂತಕನನ್ನು ಪತ್ತೆ ಹಚ್ಚುವ  ಖಡಕ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.  
 
ಚಿತ್ರದ ಫ್ಲ್ಯಾಷ್‌  ಬ್ಯಾಕ್‌ನಲ್ಲಿ  ದಶಕಗಳ ಹಿಂದೆ ನಡೆದಂಥ ಘನಘೋರ ದುರಂತ ಘಟನೆಯೊಂದು ತೆರೆದುಕೊಳ್ಳುತ್ತದೆ. `ಬೇವಿನಕೊಳ` ಅತ್ಯಂತ ಹಿಂದುಳಿದ ಹಾಗೂ ಚಿಕ್ಕ ಗ್ರಾಮ, ಅಲ್ಲಿರುವುದು ಕೇವಲ 1307 ಮತಗಳು, ಅದೇ ಕಾರಣಕ್ಕೆ ಆ ಹಳ್ಳಿಗೆ ಸರಿಯಾದ ರಸ್ತೆ ಸೌಲಭ್ಯ ಸಹ ಇರುವುದಿಲ್ಲ. ರಾಜಕಾರಣಿಗಳು ಅಲ್ಲಿಗೆ ಓಟು ಕೇಳಲು ಬಂದರೂ ಗೆದ್ದನಂತರ ಆ ಹಳ್ಳಿಯ ಕಡೆ ತಿರೂಗಿಯೂ ನೋಡಲ್ಲ, ಒಮ್ಮೆ  ಐವರು ಶ್ರೀಮಂತರು ತಮ್ಮವರಿಗೆ ಮತ ಕೇಳಲು ಬಂದಾಗ ಆ ಊರಿನ ಹಿರಿಯ ವ್ಯಕ್ತಿ ಗಂಗಾಧರಯ್ಯ ತಿರಸ್ಕರಿಸಿ ಕಳಿಸುತ್ತಾನೆ. ಅವರ ಕಡೆಯವರು ಇದೇ ಕಾರಣದಿಂದ ಚುನಾವಣೆಯಲ್ಲಿ  ಸೋಲುತ್ತಾರೆ, ಮುಂದೆ ಗಂಗಾಧರಯ್ಯನ ಪತ್ನಿ  ದೇವಿಕಾಗೆ  ಅವಳಿ ಮಕ್ಕಳ ಜನನವಾಗುತ್ತದೆ, ಅದರಲ್ಲಿ ಒಂದು ಮಗು  ವಿಚಿತ್ರ ವೈರಸ್ ಅಂಟಿಸಿಕೊಂಡು ಹುಟ್ಟಿರುತ್ತದೆ, ಅದನ್ನಿಟ್ಟುಕೊಂಡೇ ಈ ಐದೂ ಜನ, ಆರೋಗ್ಯ ತಪಾಸಣೆಯ ನೆಪವೊಡ್ಡಿ ಇಡೀ ಊರ ಜನರನ್ನೆಲ್ಲ ಸಾಯಿಸುತ್ತಾರೆ, ಅವರೆಲ್ಲ ಕಾಲರಾದಿಂದ ಸತ್ತರೆಂದು ಹಬ್ಬಿಸುತ್ತಾರೆ. ಇಲ್ಲಿ ಗಂಗಾಧರಯ್ಯನೂ ಸತ್ತ ನಂತರ ತಾಯಿ, ಮಗು ಹೇಗೋ ತಪ್ಪಿಸಿಕೊಳ್ಳುತ್ತಾರೆ, ಮುಂದೆ ಆತನೇ ಶಕ್ತಿಯಾಗಿ ಬೆಳೆಯುತ್ತಾನೆ.  ಆದಿತ್ಯ ಮತ್ತು ಜ್ಯೋತಿ ರೈ  ತಾಯಿ-ಮಗನಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ  ಮದರ್ ಸೆಂಟಿಮೆಂಟ್ ಸಾಂಗ್ ಸುಂದರವಾಗಿ ಮೂಡಿಬಂದಿದೆ. ಇನ್ನು ಈ ಕೊಲೆಗಳಿಗೆ ಬ್ಲಡ್ ಮಾಫಿಯಾ  ಹೇಗೆ  ಲಿಂಕ್ ಆಗುತ್ತದೆ ಎಂಬುದನ್ನು  ನಿರ್ದೇಶಕರು ಕುತೂಹಲಕರವಾಗಿಯೇ ತೆರೆಮೇಲೆ ತಂದಿದ್ದಾರೆ.
 
ಬ್ಲಡ್‌ ಕ್ಯಾಂಪ್‌ಗಳಲ್ಲಿ ನಾವು ದಾನವಾಗಿ ಕೊಡುವ   ರಕ್ತ ಹೇಗೆ ದುರ್ಬಳಕೆಯಾಗುತ್ತದೆ, ಬಡವರಿಗೆಂದು ನಾವು ಕೊಡುವ ರಕ್ತ ಹೇಗೆ ಮಾರಾಟವಾಗುತ್ತದೆ  ಎಂಬುದರ ಮೇಲೆ ಈ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ.
ನಟ ಆದಿತ್ಯ  ತಮ್ಮ ಪಾತ್ರವನ್ನು ಸಲೀಸಾಗಿ ನಿಭಾಯಿಸಿದ್ದಾರೆ. ಅದಿತಿ ಪ್ರಭುದೇವ ಪಾತ್ರಕ್ಕೆ ಅಷ್ಟೇನೂ ಸ್ಕೋಪ್ ಇಲ್ಲ. ಅಮ್ಮನಾಗಿ ಜ್ಯೋತಿ ರೈ ಇಷ್ಟವಾಗುತ್ತಾರೆ. ಎಸ್. ನಾರಾಯಣ್ ಇದೇ ಮೊದಲಬಾರಿಗೆ ಇಂಥ ಗಂಭೀರ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಎರಡು ಹಾಡುಗಳೂ ನೆನಪಲ್ಲುಳಿಯುತ್ತವೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - 5ಡಿ ಸೇಡಿನ ಕಿಚ್ಚಿಗೆ ರಕ್ತದ ನಂಟು --- ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.